ಮತಿಮಾಂದ್ಯ
	ಹುಟ್ಟಿದಾಗಿನಿಂದಲೋ ಶೈಶವದಿಂದಲೋ ಸಾಕಷ್ಟು ಚುರುಕಾಗಿಲ್ಲದೆ ವ್ಯಕ್ತಿ ಪೆದ್ದ, ಮಂಕು, ಮೊದ್ದು ಇತ್ಯಾದಿ ಎನ್ನಿಸಿಕೊಳ್ಳುವ ಸ್ಥಿತಿ (ಮೆಂಟಲ್ ರಿಟಾರ್ಡೇಷನ್). ಮಂದಮತಿಗಳ ಬುದ್ಧಿ ಮೊಟಕಾಗಿದ್ದು ಸಾಮಾಜಿಕ ನಡೆವಳಿಕೆಗಳನ್ನು ಅವರು ರೂಢಿಸಿಕೊಳ್ಳಲಾರವರಾಗಿರುತ್ತಾರೆ. ಕೆಲವರಲ್ಲಿ ದೈಹಿಕವಾಗಿ ಇಲ್ಲವೆ ಮಿದುಳು ರಚನೆಯಲ್ಲಿ ನ್ಯೂನತೆ ಕಂಡುಬರಬಹುದು. ಆದರೆ ಬಹುತೇಕ ರೋಗಿಗಳು ಸಾಮಾನ್ಯರಂತೆಯೇ ಕಂಡುಬರುತ್ತಾರೆ. ಮಾನಸಿಕ ಬೆಳವಣಿಗೆ ಪೂರ್ತಿ ಆದಮೇಲೆ ಎರಗುವ ಮಾನಸಿಕ ರೋಗಗಳಿಂದ ಈ ರೋಗ ವರ್ಗವನ್ನು ಭಿನ್ನವಾಗಿ ಪರಿಶೀಲಿಸುವುದು ಅಗತ್ಯ.

	ಮಂದಮತಿಗಳಲ್ಲಿ ಶೇಕಡಾ 80 ಜನ ಹುಟ್ಟಿದಾಗಿನಿಂದಾಗಲೇ ಪೆದ್ದರಾಗಿರುತ್ತಾರೆ. ಬಹುಶಃ ಅಂಗಾಣುಗಳ ವೈಪರೀತದಿಂದ ಭ್ರೂಣ ಸ್ಥಿತಿಯಲ್ಲಿ ಮತಿಮಾಂದ್ಯ ಉಂಟಾಗುವುದೆಂದು ತೋರುತ್ತದೆ. ಮಿಕ್ಕ ಶೇಕಡಾ 20 ವ್ಯಕ್ತಿಗಳು ಭ್ರೂಣಾವಸ್ಥೆಯಲ್ಲಿ ಸರಿಯಾಗಿದ್ದು ಅನಂತರ ಹುಟ್ಟುವಾಗ ಇಲ್ಲವೇ ಶೈಶವದಲ್ಲಿ ತಲೆಯ ಅಪಘಾತ, ಮಿದುಳಿನ ಸೋಂಕು ಇತ್ಯಾದಿಗಳಿಂದ ಮಂದಮತಿಗಳಾಗುತ್ತಾರೆ.

	ಮಂದಮತಿಗಳ ಬುದ್ಧಿಮಾನ (ಇಂಟಲಿಜೆನ್ಸ್ ಕೋಷೆಂಟ್-ಐ, ಕ್ಯೂ.) ಮತ್ತು ಸಾಮಾಜಿಕ ಹಾಗೂ ಔದ್ಯೋಗಿಕ (ವೊಕೆಷನಲ್) ಹೊಂದಾಣಿಕೆಗಳನ್ನು ಅನುಸರಿಸಿ ಅವರನ್ನು ಈ ಕೆಳಗೆ ವಿವರಿಸಿರುವಂತೆ ಐದು ದರ್ಜೆಯವರಾಗಿ ವಿಂಗಡಿಸುವುದಿದೆ; 

ಅತ್ಯಲ್ಪಮಂದಮತಿಗಳು (ಬಾರ್ಡರ್‍ಲೈನ್ ಮೆಂಡಲ್ ರಿಟಾರ್ಡೀಸ್); ಇವರು ಬುದ್ಧಿಮಾನ ಸಹಜದ ಸುಮಾರು ಶೇಕಡಾ 75ರಷ್ಟಿರುತ್ತದೆ. ಔದ್ಯೋಗಿಕವಾಗಿ ಇವರು ತಕ್ಕಷ್ಟು ಚುರುಕಾಗಿಲ್ಲದಿದ್ದರೂ ಅದಕ್ಕೆ ವಿಶೇಷ ಗಮನ ಕೊಡಬೇಕಾದ ಅಗತ್ಯವಿರುವುದಿಲ್ಲ. 

ಅಲ್ಪಮಂದಮತಿಗಳು (ಮೈಲ್ಡ್‍ಮೆಂಟಲ್ ರಿಟಾರ್ಡೀಸ್);ಇವರ ಬುದ್ಧಿಮಾನ ಸಹಜದ ಶೇಕಡಾ 50ರಿಂದ 70ರವರೆಗೆ ಇರುತ್ತದೆ. ಒಟ್ಟು ಮಂದಮತಿಗಳಲ್ಲಿ ಶೇಕಡಾ 85 ಜನ ಇಂಥಾವರೇ. ಬೌದ್ಧಿಕ ಹಾಗೂ ಔದ್ಯೋಗಿಕ ವಿಚಾರಗಳಲ್ಲಿ ವಿಶೇಷ ತರಬೇತಿ ಕೊಟ್ಟರೆ ಇವರು ತಮ್ಮ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳಬಲ್ಲರು. ಸಾಮಾನ್ಯವಾಗಿ ಇವರು 8-10 ವರ್ಷ ವಯಸ್ಸಿನ ವ್ಯಕ್ತಿಗೆ ಇರುವಷ್ಟು ಬುದ್ಧಿಯುಳ್ಳವರಾಗಿರುತ್ತಾರೆ.

ತೀವ್ರ ಮಂದಮತಿಗಳು (ಮಾಡರೇಟ್ ಮೆಂಟಲ್ ರಿಟಾರ್ಡೀಸ್); ಇವರ ಬುದ್ಧಿಮಾನ ಸಹಜದ ಶೇಕಡಾ 30ರಿಂದ 50ರಷ್ಟು ಇರುತ್ತದೆ; ಅಂದರೆ 4ರಿಂದ 7ವರ್ಷ ವ್ಯಕ್ತಿಯಲ್ಲಿ ಕಾಣಬರಬಹುದಾದ ಬುದ್ಧಿ ಸಾಮಥ್ರ್ಯವಿರುತ್ತದೆ. ಅಗತ್ಯ ತರಬೇತಿ ಕೊಟ್ಟು ರಕ್ಷಣಾಯುಕ್ತ ಉಸ್ತುವಾರಿಯನ್ನು ಸ್ವಲ್ಪ ಮಟ್ಟಿಗೆ ಒದಗಿಸಿದರೆ ಇವರು ತಮ್ಮ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳಬಲ್ಲರು.

ತೀವ್ರತರ ಮಂದಮತಿ (ಸಿವಿಯರ್ ಮೆಂಟಲ್ ರಿಟಾರ್ಡೀಸ್); ಇವರ ಬುದ್ಧಿಮಾನ ಸಹಜದ ಶೇಕಡಾ 25-30ರಷ್ಟು; ಮೂರು ವರ್ಷದ ಮಗುವಿನ ಬುದ್ಧಿಗೆ ಸಮ. ಇವರು ಸಂಸ್ಥೆಯಲ್ಲಿ ಉಸ್ತುವಾರಿಗೆ ಒಳಪಟ್ಟು ಬಾಳುವುದು ವಿಹಿತ. ಇವರಲ್ಲಿ ಸಾಮಾನ್ಯವಾಗಿ ದೈಹಿಕ ನ್ಯೂನತೆಗಳೂ ಇದ್ದು ರೋಗಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ಒಟ್ಟು ಮಂದಮತಿಗಳಲ್ಲಿ ಶೇಕಡಾ 3-4 ಜನ ಇಂಥವರು.

ತೀವ್ರತಮ ಮಂದಮತಿ (ಪ್ರೊಫೌಂಡ್ ಮೆಂಟಲ್ ರಿಟಾರ್ಡೀಸ್); ಇವರ ಬುದ್ಧಿಮಾನ ಸಹಜದ ಶೇಕಡಾ 20 ಕ್ಕಿಂತಲೂ ಕಡಿಮೆ. ಇವರು ಎಳೆ ಮಕ್ಕಳಂತೆ ಪೂರ್ಣ ಪರಾಧೀನರು. ಕಾಲಪೂರ್ವ ಪ್ರಸವ (ಪ್ರಿಮೆಚ್ಯೂರ್‍ಬರ್ತ್), ಹುಟ್ಟುತೂಕ ಕಡಿಮೆ ಆಗಿರುವಿಕೆ, ಶೈಶವದಲ್ಲಿ ಬೆಳವಣಿಗೆ ಹಂತಗಳು ಮಗುಚಿಕೊಳ್ಳುವಿಕೆ ಇತ್ಯಾದಿ ತಡವಾಗಿರುವಿಕೆ, ಶೈಶವದಲ್ಲಿ ಅತಿಯಾದ ಜ್ವರದಿಂದ ಕೂಡಿದ ರೋಗಪ್ರಾಪ್ತಿ, ಬಾಲಾರಿಷ್ಟ, ಎಳೆತನದಲ್ಲಿ ಅತ್ತು ಕರೆಯದೆ ಅತಿ ಸೌಮ್ಯವಾಗಿರುವಿಕೆ, ಶಾಲಾ ವಯಸ್ಸಿನಲ್ಲಿ ಪಾಠ ಕಲಿಯಲು ಕಷ್ಟ ಇತ್ಯಾದಿ ಪ್ರಸಂಗಗಳಲ್ಲಿ ಮತಿಮಾಂದ್ಯ ಇರುವ ಪ್ರಮೇಯವಿದೆ. ಮತಿಮಾಂದ್ಯಕ್ಕೆ ಯುಕ್ತಮದ್ದು ಯಾವುದೂ ಇಲ್ಲ. ಆದಷ್ಟು ಬೇಗ ಈ ಸ್ಥಿತಿಯ ಪತ್ತೆ ಹೆಚ್ಚುವುದು ಅಗತ್ಯ. ಮಗುವಿನ ತಂದೆ ತಾಯಿಯರಲ್ಲಿ ವಿಚಾರಮಾಡಿ ಮತಿಹೀನತೆ ಎಷ್ಟುಮಟ್ಟಿಗೆ ಇದೆ ಎಂದು ತಿಳಿಯಬೇಕು. ಇದಕ್ಕೆ ತಾವೇ ಹೊಣೆ ಏನೋ ಎನ್ನುವ ಶಂಕೆಯನ್ನು ತಂದೆ ತಾಯಿಗಳಿಂದ ದೂರಮಾಡಿ ಮಗುವಿಗೆ ತಕ್ಕ ತರಬೇತಿ ಕೊಡಲು ಸಲಹೆ ನೀಡಬೇಕು. ಮಗುವಿನ ಬುದ್ಧಿಮಾನ, ಸಂಸಾರದ ಹಾಗೂ ಸಾಮಾಜಿಕ ಅನುಕೂಲತೆಗಳನ್ನು ಅವಲಂಬಿಸಿ ಸಲಹೆ ನೀಡತಕ್ಕದ್ದು. ಮಗುವನ್ನು ವಿಶಿಷ್ಟ ಶಾಲೆಯಲ್ಲಿ ಕಲಿಯಲು ಸೇರಿಸಬೇಕು.   

	ತಾಯಿಯ ಗರ್ಭಸ್ಥಿತಿಯಲ್ಲಿ ಅಪಘಾತ, ರೂಬೆಲ್ಲ ಸೋಂಕು, ಎಕ್ಸ್‍ಕಿರಣ ಇವುಗಳಿಂದ ಜಖಮ್ಮಾಗದಂತೆ ನೋಡಿಕೊಳ್ಳುವುದು, ಸ್ತ್ರೀ 35 ವರ್ಷಗಳ ಅನಂತರ ಗರ್ಭಿಣಿಯಾಗುವುದನ್ನು ತಪ್ಪಿಸುವುದು, ಸಕುಟುಂಬ ಹಾಗೂ ಸಗೋತ್ರ ವಿವಾಹವಾಗದಿರುವುದು ಈ ಕ್ರಮಗಳಿಂದ ಮಂದಮತಿಗಳ ಜನನವಾಗುವುದನ್ನು ನಿವಾರಿಸಬಹುದು.
(ಎಸ್.ಎಂ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ